ಚಿಪ್ಪುಗಳು ಮತ್ತು ಚಿಪ್ಪು ಸಂಗ್ರಹಣೆ

ಸಾಧಾರಣವಾಗಿ ಕೆಲವು ಜೀವಿಗಳ ಮೈಯನ್ನು ಆವರಿಸಿರುವ ಕಠಿಣವಾದ ರಕ್ಷಾಕವಚವನ್ನು ಚಿಪ್ಪು ಎನ್ನುವರು. ಚಿಪ್ಪುಗಳು ಸಸ್ಯಗಳು ಕಾಯಿ ಮತ್ತು ಬೀಜಗಳನ್ನೂ ಪ್ರಾಣಿಗಳಲ್ಲಿ ಸರೀಸೃಪ ಮತ್ತು ಪಕ್ಷಿಗಳ ಮೊಟ್ಟೆಗಳನ್ನೂ ಆಮೆ, ಚಿಪ್ಪು ಹಂದಿ ಮುಂತಾದ ಕಶೇರುಕಗಳ ಹೊರಮೈಯನ್ನು ಆವರಿಸಿವೆ. ಪೊರಾಮಿನಿಫೆರ, ಕಠಿಣಚರ್ಮಿ ಕಂಟಕಚರ್ಮಿ, ಬ್ರ್ಯಾಕಿಯೋಪೊಡ, ಮೃದ್ವಂಗಿ (ಮಾಲಸ್ಕ) ಮುಂತಾದ ಅಕಶೇರುಕಗಳಲ್ಲಿಯೂ ಚಿಪ್ಪುಗಳಿವೆ. ಪ್ರಸಕ್ತ ಲೇಖನದಲ್ಲಿ ಮೃದ್ವಂಗಿ ಚಿಪ್ಪುಗಳ ವಿಚಾರವನ್ನು ಮಾತ್ರ ತಿಳಿಸಿದೆ.

ಮೃದ್ವಂಗಿ ಚಿಪ್ಪುಗಳು ಮನಮೋಹಕವಾದುದರಿಂದ ಲೋಕಪ್ರಸಿದ್ಧವಾಗಿವೆ. ವೈವಿಧ್ಯಮಯ ವರ್ಣವಿನ್ಯಾಸ, ಆಕಾರ, ಪ್ರರೂಪ, ಮಿರುಗುವ ಮೈರಚನೆಗಳನ್ನು ಪಡೆದಿರುವುದರಿಂದಲೂ ಕಡಲಿನ ತೀರದಲ್ಲಿ ಹೇರಳವಾಗಿ ಸಿಗುವುದರಿಂದಲೂ ಇವು ಮಾನವನನ್ನು ಹಿಂದಿನಿಂದಲೂ ಆಕರ್ಷಿಸಿವೆ. ಆದ್ದರಿಂದಲೇ ಹಿಂದೆ ಜನ ಇವನ್ನು ಆಭರಣ, ಸಲಕರಣೆ ಮತ್ತು ನಾಣ್ಯಗಳನ್ನಾಗಿ ಉಪಯೋಗಿಸುತ್ತಿದ್ದರು. ಇವುಗಳ ವಿಚಾರವಾಗಿ ಅರಿಸ್ಟಾಟಲ್ ಮತ್ತು ಪ್ಲಿನಿ ದೀರ್ಘವಾಗಿ ಬರೆದಿದ್ದಾರೆ. ಪುರಾತನ ಪಾಂಪೆ ಕಟ್ಟಡದ ಅವಶೇಷಗಳಲ್ಲಿ ಮತ್ತು ಯೂಕಟಾನ್‍ನ ಮಯೂನ್ ಪಿರಮಿಡ್ಡಿನ ಒಂದು ಗೂಡಿನಲ್ಲಿ ಚಿಪ್ಪುಗಳು ಕಂಡುಬಂದಿವೆ. ಬಹುಶಃ ಪುರಾತನ ಕಾಲದಲ್ಲಿ ಮಾಡಿದ ಚಿಪ್ಪುಗಳ ಸಂಗ್ರಹಣೆಯ ಉಳಿಕೆಗಳು ಇವು ಎಂದು ತಿಳಿಯಲಾಗಿದೆ. ಮೃದ್ವಂಗಿ ವಂಶದಲ್ಲಿ ಐದು ವರ್ಗಗಳಿವೆ. ಕೆಲವು ಪ್ರಭೇದಗಳನ್ನುಳಿದು ಮಿಕ್ಕೆಲ್ಲ ಮೃದ್ವಂಗಿಗಳಲ್ಲಿ ಚಿಪ್ಪುಗಳು ದೇಹವನ್ನು ಆವರಿಸಿವೆ. ಆಂಫಿನ್ಯೂರ ವರ್ಗದ ಕೈಟಾನಿಡೀ ಕುಟುಂಬದ ಪ್ರಾಣಿಗಳ ಮೈಮೇಲೆ ಫಲಕಗಳಿವೆ. ಸ್ಕ್ಯಾಪೊಪೋಡ ವರ್ಗದಲ್ಲಿ ಆನೆಕೊಂಬಿನಂಥ ಕೊಳವೆ ರೀತಿಯ ಒಂದೇ ಒಂದು ಚಿಪ್ಪು ಇದೆ. ಕಪ್ಪೆಚಿಪ್ಪು ಪ್ರಾಣಿಗಳಲ್ಲಿ ಜೋಡಿ ಚಿಪ್ಪುಗಳೂ ಗ್ಯಾಸ್ಟ್ರೊಪೊಡ ವರ್ಗದಲ್ಲಿ ಶಂಖಾಕಾರದ ಒಂದು ಚಿಪ್ಪೂ ಹೊರಕವಚವಿರುವ ಶಿರೋಪಾದಿಗಳಲ್ಲಿ (ಸೆಫಲಾಪೊಡ) ಕೋಣೆಗಳಿರುವ ಚಿಪ್ಪುಗಳೂ ಇವೆ. ಚಿಪ್ಪುಗಳು ಮೃದ್ವಂಗಿಗಳ ಮೆತು ದೇಹವನ್ನು ಆವರಿಸಿ ರಕ್ಷಣೆಯನ್ನು ಕೊಡುತ್ತವೆ. ಮೃದ್ವಂಗಿಗಳ ದೇಹದ ಸುತ್ತ ಇರುವ ಮ್ಯಾಂಟಲಿನ ಹೊರಪದರದ ಜೀವಕೋಶಗಳು ಚಿಪ್ಪನ್ನು ನಿರ್ಮಿಸುವುವು. ಚಿಪ್ಪಿನ ಉತ್ಪಾದನೆ ಸಾಧಾರಣವಾಗಿ ಎಲ್ಲ ಮೃದ್ವಂಗಿಗಳಲ್ಲಿ ಒಂದೇ ರೀತಿಯದು. ಚಿಪ್ಪಿನಲ್ಲಿ ಹೊರಗಿನ ಪೆರಿಯಾಸ್ಟ್ರೇಕಮ್, ಮಧ್ಯದ ಪ್ರಿಸ್ಮಾಟಿಕ್ ಮತ್ತು ಒಳಗಿನ ನೆಕ್ರಿಯಸ್ ಪದರಗಳಿವೆ. ವಿವಿಧ ಪ್ರಭೇದಗಳಲ್ಲಿ ಈ ಪದರಗಳ ದಪ್ಪ ಹಾಗೂ ಒಳರಚನೆ ಬೇರೆ ಬೇರೆ ರೀತಿ ಇರುವುದುಂಟು.

ಚಿಪ್ಪುಗಳು ಪ್ರಾಣಿಯ ದೇಹವನ್ನು ರಕ್ಷಿಸುವುವಲ್ಲದೆ ವಿವಿಧ ಅಂಗಗಳಿಗೆ ಆಧಾರವಾಗಿವೆ. ಪ್ರಾಣಿಗೂ ಅದರ ಚಿಪ್ಪಿಗೂ ನಿಕಟ ಸಂಬಂಧ ಉಂಟು. ಚಿಪ್ಪಿಲ್ಲದೆ ಪ್ರಾಣಿ ಜೀವಿಸಲಾರದು. ಪ್ರಾಣಿ ಸತ್ತ ಮೇಲೆ ಅದರ ಖಾಲಿ ಚಿಪ್ಪನ್ನು ಕೆಲವು ಸಣ್ಣಪ್ರಾಣಿಗಳು ತಮ್ಮ ಗೂಡನ್ನಾಗಿ ಉಪಯೋಗಿಸುವುದುಂಟು. ಉದಾಹರಣೆಗೆ ಸಂನ್ಯಾಸಿ ಏಡಿ ಶಂಖವನ್ನು ತಾತ್ಕಾಲಿಕ ಗೂಡನ್ನಾಗಿ ಮಾಡಿಕೊಳ್ಳುತ್ತದೆ. ಮೃದ್ವಂಗಿಗಳು ಅನೇಕ ಪ್ರಾಣಿಗಳ ಜೊತೆ ಸಹಚರ ಜೀವನವನ್ನು ನಡೆಸುತ್ತವೆ. ಉದಾಹರಣೆಗೆ ಚಿಪ್ಪಿನ ಮೇಲೆ ವಾಸಿಸುವ ಕುಟುಕಕಣವಂತ ಜೀವಿಗಳು ಮತ್ತು ಮೃದ್ವಂಗಿಗಳು ಒಂದಕ್ಕೊಂದು ಸಹಾಯಕವಾಗುವುವು.

ಚಿಪ್ಪುಗಳ ಸಂಗ್ರಹಣೆ ನಾಣ್ಯ ಮತ್ತು ಅಂಚೆಚೀಟಿಗಳ ಸಂಗ್ರಹಣೆಯ ಹವ್ಯಾಸದಂತೆ ಬಹಳ ಇತ್ತೀಚಿನದು. ಇವುಗಳ ಶೇಖರಣೆಯ ಕಾರ್ಯ 18ನೆಯ ಶತಮಾನದ ಪೂರ್ವಾರ್ಧದ ಅಂತರದಲ್ಲಿ ಇಂಗ್ಲಂಡಿನಲ್ಲಿ ಬಹು ಹೆಚ್ಚಾಗಿತ್ತು. ಈ ಕಾಲದಲ್ಲಿ ಕಂಡುಹಿಡಿದ ಹೊಸ ದ್ವೀಪ ಗಳಿಂದ ಅಪೂರ್ವವಾದ ಹಾಗೂ ಆಕರ್ಷಣೀಯವಾದ ಹೊಸ ಚಿಪ್ಪುಗಳ ಸಂಗ್ರಹಣೆಯಾಯಿತು. ಅವನ್ನು ಸಿರಿವಂತ ವರ್ತಕರು ತಮ್ಮ ಸಂಗ್ರಹಣೆಯ ಮಾದರಿಗಳಿಗಾಗಿ ಕೊಂಡರು. 1850-60ರಲ್ಲಿ ಚಿಪ್ಪು ಸಂಗ್ರಹಣೆಯ ಹವ್ಯಾಸ ವಿಫುವಾಗಿತ್ತಲ್ಲದೆ ಅವುಗಳ ಹರಾಜೂ ಸರ್ವೇಸಾಧಾರಣವಾಗಿತ್ತು. ಆಗ ಅಪರೂಪದ ಹಾಗೂ ಆಕರ್ಷಣೀಯ ಚಿಪ್ಪುಗಳಿಗೆ ಒಳ್ಳೆಯ ಬೆಲೆ ಸಿಗುತ್ತಿತ್ತು. ಆದರೆ ಚಿಪ್ಪು ಸಂಗ್ರಹಕಾರರು ಹೆಚ್ಚಾದಂತೆ ಅಪರೂಪದ ಚಿಪ್ಪುಗಳು ಮಾರುಕಟ್ಟೆಗೆ ಹೆಚ್ಚು. ಬರತೊಡಗಿ ಅವುಗಳ ಬೆಲೆ ಇಳಿಮುಖವಾಯಿತು. ಉದಾಹರಣೆಗೆ ಮೊದಮೊದಲು ಒಂದು ಚಿಪ್ಪಿಗೆ 50-60 ಪೌಂಡು ಮೌಲ್ಯವಿದ್ದ ಜನಪ್ರಿಯವಾದ ವೊಲುಟಜುನೋನಿಯ ಎಂಬ ಚಿಪ್ಪಿನ ಬೆಲೆ ಅದರ ಸಂಗ್ರಹಣೆ ಹೆಚ್ಚಾದಮೇಲೆ 5 ಪೌಂಡಿಗೆ ಇಳಿಯಿತು. ಇದರಂತಯೇ ಇನ್ನೂ ಅನೇಕ ಚಿಪ್ಪುಗಳ ಬೆಲೆಯೂ ತಗ್ಗಿತು. ಆದರೂ ಅವುಗಳ ವರ್ಣವಿನ್ಯಾಸ, ವೈವಿಧ್ಯಮಯ ಆಕಾರ, ಮೈರಚನೆ ಬಹು ಮೋಹಕವಾದುದರಿಂದಲೂ ಬಹುಮುಖ ಉಪಯೋಗಗಳಿಂದಲೂ ಚಿಪ್ಪುಗಳ ಸಂಗ್ರಹಣೆಯ ಕಾರ್ಯ ಜನಪ್ರಿಯವಾಗಿ ಮುಂದುವರಿದಿದೆ.

  	ಮೃದ್ವಂಗಿಗಳು ಜಲ ಮತ್ತು ನೆಲವಾಸಿಗಳೆರಡೂ ಹೌದು. ಆದರೆ ಜಲವಾಸಿಗಳೇ ಹೆಚ್ಚು. ಅದರಲ್ಲೂ ಬಹುಪಾಲು ಮೃದ್ವಂಗಿಗಳು ಕಡಲಲ್ಲಿ ಜೀವಿಸುತ್ತವೆ. ಬಹು ಅಪರೂಪದ, ಅಂದದ, ಅಮೂಲ್ಯವಾದ ಚಿಪ್ಪು ಪ್ರಾಣಿಗಳು ಕಡಲಲ್ಲಿ ಸಿಗುವುವು. ಚಿಪ್ಪುಗಳ ಜಗತ್ತಿನಲ್ಲಿ ಅತಿ ಹೆಚ್ಚಿನ ಸ್ಥಾನವನ್ನು ಪಡೆದಿರುವ ಪ್ರಭೇದಗಳ ಕುಟುಂಬಗಳೆಂದರೆ ಸೈಪ್ರಿಡೀ (ಕವಡೆಗಳು), ಕೋನಡೀ (ಶಂಖಗಳು) ವಲ್ಯೂಟಿಡೀ (ವಲ್ಯೂಟ್‍ಗಳು) ಮತ್ತು ಮ್ಯೂರಿಸಿಡೀ (ಬಂಡೆಚಿಪ್ಪುಗಳು); ಇವೆಲ್ಲವೂ ಗ್ಯಾಸ್ಟ್ರೊಪೊಡ ವರ್ಗಕ್ಕೆ ಸೇರಿದವು. ಅತಿ ಅಪೂರ್ವವಾದ ಹಾಗೂ ಪ್ರಿಯವಾದ ಒಂದು ಪ್ರಭೇದವೆಂದರೆ ಕಡಲ ಶೋಭೆ (ಗ್ಲೋರಿ ಆಫ್ ದಿ ಸೀ) ಎಂದು ಹೆಸರಾಗಿರುವ ಕೋನಸ್ ಗ್ಲೋರಿಯ ಮಾರಿಸ್ ಎಂಬ ಚಿಪ್ಪು. ಇಲ್ಲಿಯ ವರೆಗೆ ಬಹು ಮೋಹಕವಾದ ಈ ತೆರನ ಸುಮಾರು 30 ಚಿಪ್ಪುಗಳು ಮಾತ್ರ ಸಿಕ್ಕಿವೆ. 1957ರಲ್ಲಿ ಒಂದು ಚಿಪ್ಪಿನ ಬೆಲೆ 1250 ಡಾಲರ್ ಇತ್ತು.
ಮೃದ್ವಂಗಿಗಳು ವಿವಿಧ ಪರಿಸರಗಳಲ್ಲಿ ವಾಸಿಸುತ್ತವೆ. ಕೆಲವು ಉಬ್ಬರವಿಳಿತ ಪ್ರದೇಶಗಳಲ್ಲಿ ವಾಸಿಸಿದರೆ ಮತ್ತೆ ಕೆಲವು ಆಳ ನೀರಿನಲ್ಲಿ ವಾಸಿಸುವುವು. ಇದರಿಂದಾಗಿ ಕೆಲವು ಚಿಪ್ಪುಗಳು ಅಪರೂಪ, ಕೆಲವು ಬಹಳ ಸಾಮಾನ್ಯ. ಮತ್ತೆ ಕೆಲವು ಬಲು ಹೇರಳ. ಮರಳಿರುವ ಅಥವಾ ಬಂಡೆಗಳಿರುವ ಉಬ್ಬರವಿಳಿತ ತೀರಪ್ರದೇಶಗಳಿಗೆ ಅನೇಕ ಪ್ರಭೇದಗಳು ಹೊಂದಿಕೊಂಡಿವೆ. ಇಂಥಲ್ಲಿ ಉಬ್ಬರ ಪೂತಿ ಇಳಿದ ಮೇಲೆ ಚಿಪ್ಪುಗಳು ಆಯ್ದುಕೊಳ್ಳುವುದು ಸುಲಭ. ಉಬ್ಬರವಿಳಿತ ಪ್ರದೇಶದಲ್ಲಿ ಬಹು ಅಂದದ ಕೆಲವು ಚಿಪ್ಪುಗಳು ಸಿಗುವುದುಂಟು. ಉದಾಹರಣೆಗೆ ನಯವಾದ ಹೊಳಪು ರಂಗಿನ ಆಲಿವಿಡೀ (ಆಲಿವ್ ಚಿಪ್ಪುಗಳು), ನಾಟಿಸಿಡೀ (ಚಂದ್ರ ಚಿಪ್ಪುಗಳು), ಸ್ಟ್ರಾಂಬಿಡೀ (ಸ್ಟ್ರೌಂಬ್‍ಗಳು), ಟೆರೆಬ್ರಿಡೀ (ಶಕುನ ಚಿಪ್ಪುಗಳು) ಮತ್ತು ಅನೇಕ ಜೋಡಿಚಿಪ್ಪು ಪ್ರಾಣಿಗಳ ಚಿಪ್ಪುಗಳು, ಬಂಡೆಗಳ ಮೇಲೆ ಹಾಗೂ ಕೆಳಗೆ ಲಿಟೊರಿನಿಡೀ (ಪೆರಿವಿಂಕಲ್), ಟರ್ಬೊ (ರುಮಾಲು ಚಿಪ್ಪು) ಮತ್ತು ಲಿಂಪೆಟ್‍ಗಳು ಹಾಗೂ ಸುರುಳಿಸುತ್ತುವ ಕೈಟಾನಿಡೀ ಪ್ರಾಣಿಗಳು ಕಂಡುಬರುತ್ತವೆ. ಮಿಕ್ಕ ಮೃದ್ವಂಗಿಗಳು ಸಮುದ್ರದ ಉಬ್ಬರವಿಳಿತ ಕನಿಷ್ಠ ರೇಖೆಯಾಚೆಯ ನೆರಿಟಿಕ್ ವಲಯದ ನೀರಿನಲ್ಲಿ ವಾಸಿಸುತ್ತವೆ. ಇವುಗಳ ಚಿಪ್ಪುಗಳು ಬಿರುಗಾಳಿ ಎದ್ದಾಗ ತೀರಕ್ಕೆ ಒಗೆಯಲ್ಪಡುವುವು. ಈ ಪ್ರದೇಶದ ಚಿಪ್ಪುಗಳು ಉಬ್ಬರವಿಳಿತ ಪ್ರದೇಶದ ಚಿಪ್ಪುಗಳಿಗಿಂತ ಅಪೂರ್ವ ಮತ್ತು ಅಮೂಲ್ಯ. ಆಳಸಮುದ್ರದಲ್ಲಿ ಬಹು ಅಪೂರ್ವವಾದ ಬೆಲೆಯ ವಲ್ಯೂಟ್‍ಗಳು, ಶಂಖಗಳು, ಕವಡೆಗಳು ಮತ್ತು ಬಂಡೆಚಿಪ್ಪುಗಳು ಇವೆ. ಇವನ್ನು ಮೇಲಕ್ಕೆ ತರಲು ವಿಶೇಷ ಹಡಗುಗಳು ಮತ್ತು ಆಳಸಮುದ್ರದಲ್ಲಿ ಉಪಯೋಗಿಸುವ ಸಲಕರಣೆಗಳು ಅಗತ್ಯ. ಆದ್ದರಿಂದ ಈ ಚಿಪ್ಪುಗಳ ಸಂಗ್ರಹಣೆ ಕಷ್ಟಕರವಾದುದು ಮತ್ತು ದುಬಾರಿ ಖರ್ಚಿನದು ಕೂಡ. ಇದರಿಂದಾಗಿ ಸಾಮಾನ್ಯ ಸಂಗ್ರಹಕಾರನಿಗೆ ಇವು ಸಿಗುವುದು ಅಸಾಧ್ಯವಾಗಬಹುದು. ಆದರೆ ಈ ಚಿಪ್ಪುಗಳು ಸೀಗಡಿ ಅಥವಾ ಮೀನುಬಲೆಗಳಲ್ಲಿ ಬರುವುದುಂಟು. ಉದಾಹರಣೆಗೆ ಮೂಲಂಗಿ ಆಕಾರದ ಚಿಪ್ಪಿರುವ ಬ್ಯೂಸಿಕಾನ್ ಕೊಯಾರ್ಕ್‍ಟೇಟಮ್.

ಆಳ ನೀರಿನ ಚಿಪ್ಪುಗಳನ್ನು ಮೃದ್ವಂಗಿ ಭಕ್ಷಕ ಮೀನುಗಳ ಹೊಟ್ಟೆಯನ್ನು ಸೀಳಿ ಶೇಖರಿಸಬಹುದು. ಸಮುದ್ರ ತಳದಲ್ಲಿ ವಾಸಿಸುವ ಮೀನುಗಳಾದ ಹ್ಯಾಡಕ್ ಮತ್ತು ಕಾಡ್ ಮೀನುಗಳ ಹೊಟ್ಟೆಗಳಲ್ಲಿ ಒಡೆಯದ ಹಾಗೂ ಶುಭ್ರವಾದ ಚಿಪ್ಪುಗಳು ಸಿಕ್ಕಿವೆ. ಫುಲ್ಟನ್ ಕವಡೆ (ಸೈಪ್ರಿಯ ಫುಲ್ಟೋನಿ) ಮುಂತಾದ ಅಪರೂಪದ ಮತ್ತು ಹೆಚ್ಚು ಬೆಲೆಯ ಚಿಪ್ಪುಗಳನ್ನು ಈ ವಿಧದಿಂದಲೇ ಸಂಗ್ರಹಿಸುವರು. ಹವಳದಲ್ಲಿ ಅಡಗಿರುವ ಅನೇಕ ಅಮೂಲ್ಯ ಚಿಪ್ಪುಗಳನ್ನು ನೀರಿನಲ್ಲಿ ಮುಳುಗಿ ತರುತ್ತಾರೆ. ಶಿರೋಪಾದಿಗಳಲ್ಲಿ ನಾಟಿಲಸ್ ಜಾತಿಯ ಪ್ರಾಣಿಗಳು ವೈಜ್ಞಾನಿಕ ಹಾಗೂ ವಾಣಿಜ್ಯ ದೃಷ್ಟಿಯಿಂದ ಮುಖ್ಯವಾದುವು. ಸಾಧಾರಣವಾಗಿ ಆಳಸಮುದ್ರದಲ್ಲಿ ಜೀವಿಸುವ ಈ ಪ್ರಾಣಿಯ ಚಿಪ್ಪು ಬಲು ಆಕರ್ಷಕವಾಗಿದೆ. ಅನೇಕ ಮೃದ್ವಂಗಿಗಳು ಭೂ ವಾಸಿಗಳೂ ಹೌದು. ಇಂಥವುಗಳಲ್ಲಿ ವರ್ಣರಂಜಿತ ಚಿಪ್ಪುಗಳಿವೆ. ಜೀವನಕ್ಕೆ ಅವಶ್ಯಕವಾದ ನೆರಳು, ತೇವ ಮತ್ತು ಆಹಾರ ದೊರೆಯುವ ಸ್ಥಳಗಳಲೆಲ್ಲ ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಬಹುತೇಕ ಭೂ ಮೃದ್ವಂಗಿಗಳು ಸಣ್ಣವು ಮತ್ತು ಸರಳ. ಇವು ಎಲ್ಲರಿಗೂ ಪ್ರಿಯವಾದುವಲ್ಲ. ಪ್ರಾದೇಶಿಕ ಅಭ್ಯಾಸ ನಡೆಸುವ ವಿಜ್ಞಾನಿಗೆ ಹಾಗೂ ಹವ್ಯಾಸಿ ಸಂಗ್ರಹಕಾರರಿಗೆ ಮಾತ್ರ ಇವುಗಳಲ್ಲಿ ಆಸಕ್ತಿ.ಕೆಲವು ಹೊಳೆಯುವ ಬಣ್ಣದ ಚಿಪ್ಪುಗಳೂ ದೊಡ್ಡಗಾತ್ರದ ಚಿಪ್ಪುಗಳೂ ಇರುವುದುಂಟು. ಇವುಗಳಲ್ಲಿ ದಕ್ಷಿಣ ಫ್ಲಾರಿಡ ಮತ್ತು ಕ್ಯೂಬದಲ್ಲಿರುವ ಲಿಗ್ವಸ್ ಎಂಬ ಮರಶಂಖ ಪಾಪುವದ ಪಾಪೈನ, ಫಿಲಿಪೀನ್ಸಿನ ಹೆಲೆಕೊಸ್ಟೈಲ ಮತ್ತು ಆಫ್ರಿಕದ ಅಖಾಟಿನ ಜಾತಿಯ ಪ್ರಾಣಿಗಳೂ ಎಲ್ಲರಿಗೂ ಪರಿಚಿತವಾಗಿರುವ ಮೃದ್ವಂಗಿಗಳು. ಇವುಗಳ ಸಂಗ್ರಹ ಸುಲಭವಲ್ಲ. ಸಂಗ್ರಹಕಾರರು ಅನೇಕ ಅನನುಕೂಲತೆಗಳನ್ನೂ ಅಪಾಯ ಪರಿಸ್ಥಿತಿಗಳನ್ನೂ ಎದುರಿಸಬೇಕಾಗುವುದು. ಉದಾಹರಣೆಗೆ, ಫ್ಲಾರಿಡದ ಮರಶಂಖ ಪ್ರಾಣಿಗಳೂ ವಾಸಿಸುವ ಪ್ರದೇಶದಲ್ಲಿ ಅಪಾಯಕಾರಿಗಳಾದ ಕಾಟನ್ ಮೌತ್ ಹಾವು, ಬುಡುಬುಡಿಕೆ ಹಾವು ಮುಂತಾದ ವಿಷಸರ್ಪಗಳೂ ಸೊಳ್ಳೆಗಳೂ ಇರುವುದರಿಂದ ಈ ಚಿಪ್ಪಿನ ಸಂಗ್ರಹ ಬಲುಕಷ್ಟ. ಸಿಹಿ ನೀರಿನ ಮೃದ್ವಂಗಿಗಳಲ್ಲಿ ಅಂದವಾಗಿರುವ ಚಿಪ್ಪುಗಳಿರುವುದು ಕೆಲವು ಪ್ರಾಣಿಗಳಲ್ಲಿ ಮಾತ್ರ. ಆದ್ದರಿಂದ ಸಂಗ್ರಹಕಾರರ ದೃಷ್ಟಿಯಲ್ಲಿ ಸಿಹಿನೀರಿನ ಮೃದ್ವಂಗಿಗಳು ಅಷ್ಟು ಮುಖ್ಯವಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನದ ಮಧ್ಯ ಪಶ್ಚಿಮಭಾಗದಲ್ಲಿ ಹರಿಯುವ ಕೆಲವು ನದಿಗಳಲ್ಲಿ ಕೆಲವು ಜೋಡಿ ಚಿಪ್ಪು ಪ್ರಾಣಿಗಳ ಪ್ರಭೇದಗಳಿವೆ. ಅವುಗಳ ಚಿಪ್ಪುಗಳ ಒಳಮೈ ಮಯತ್ತಿನ ಬಣ್ಣಕ್ಕಿರುತ್ತದೆ. ಇವುಗಳಲ್ಲಿ ಸಣ್ಣಗಂತಿ ಮತ್ತು ಅಲೆಯಂತಿರುವ ಏಣುಗಳನ್ನುಳ್ಳ ಕೆಲವು ಚಿಪ್ಪುಗಳು ಹೆಚ್ಚು ಸುಂದರವಾಗಿರುವುದರಿಂದ ಗುಂಡಿಗಳನ್ನು ತಯಾರಿಸಲು ಇವನ್ನು ಬಳಸುವರು. ಸಿಹಿನೀರಿನ ಶಂಖ ಪ್ರಾಣಿಗಳು ಉಷ್ಣವಲಯದ ರೋಗ ತಜ್ಞರಿಗೆ ಬಹು ಮುಖ್ಯವಾದವು. ಏಕೆಂದರೆ ಇವುಗಳಲ್ಲಿ ಕೆಲವು ಮನುಷ್ಯನ ಹಾಗೂ ಪ್ರಾಣಿಗಳ ರೋಗಗಳನ್ನು ಹರಡುವ ಪರಾವಲಂಬಿಗಳಿಗೆ ಆಶ್ರಯದಾತವಾಗಿವೆ.

   	ಬಹುತೇಕ ಸಂಗ್ರಹಕಾರರ ಅಭಿರುಚಿ ಹೆಚ್ಚು ಮೌಲ್ಯದ ಚಿಪ್ಪುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಕೆಲವರಿಗೆ ಪ್ರಾದೇಶಿಕ ಚಿಪ್ಪುಗಳ ಸಂಗ್ರಹಣೆಯಲ್ಲಿ ಮಾತ್ರ ಆಸಕ್ತಿ. ಇವರು ಆಯಾ ಪ್ರದೇಶದ ಮೃದ್ವಂಗಿಗಳು ವಾಸಿಸುವ ಪರಿಸರ, ಅವುಗಳ ಸ್ವಭಾವಗಳ ವಿಚಾರವಾಗಿ ಅಮೂಲ್ಯವಾದ ವೈಜ್ಞಾನಿಕ ಅಂಶಗಳನ್ನು ಒದಗಿಸುವರು. ಇನ್ನೂ ಕೆಲವು ಸಂಗ್ರಹಕಾರರು ಒಂದು ಗೊತ್ತಾದ ಜಾತಿಗೆ ಸೇರಿದ ಪ್ರಬೇದಗಳ ಚಿಪ್ಪುಗಳನ್ನು ಮಾತ್ರ ಶೇಖರಿಸುವರು. ವರ್ಗೀಕರಣ ಮತ್ತು ವಿಕಾಸದ ಅಧ್ಯಯನದಲ್ಲಿ ನಿರತರಾಗಿರುವ ವಿಜ್ಞಾನಿಗಳಿಗೆ ಈ ರೀತಿಯ ಸಂಗ್ರಹಣೆ ಬಹು ಉಪಯುಕ್ತವಾಗಿದೆಯಲ್ಲದೆ ಚಿಪ್ಪುಗಳ ಜಗತ್ತಿನ ಯಥಾರ್ಥದರ್ಶನವನ್ನೂ ನೀಡುವುದು. ಭೂ ಮೃದ್ವಂಗಿ ತಜ್ಞರ ಹಾಗೆ ಭೂಚರ ಮೃದ್ವಂಗಿ ತಜ್ಞರೂ ಇದ್ದಾರೆ. ಭೂ ಮೃದ್ವಂಗಿಗಳು ಕಡಲ ಮೃದ್ವಂಗಿಗಳಿಗಿಂತ ಗಾತ್ರದಲ್ಲಿ ಸಣ್ಣವಾದ್ದರಿಂದ ಅವುಗಳ ಸಂಗ್ರಹ ಅನೇಕ ಸುಲಭ. ಕಡಿಮೆ ಖರ್ಚಿನಲ್ಲಿ ಒಂದು ಕುಟುಂಬದ ಅಥವಾ ಜಾತಿಯ ಎಲ್ಲ ಚಿಪ್ಪುಗಳನ್ನೂ ಸಂಗ್ರಹಿಸಲು ಸಾಧ್ಯವಾಗುತ್ತದೆ. ಚಿಪ್ಪುಗಳ ಸಂಗ್ರಹ ಅನೇಕ ಅಭಿರುಚಿಯ ಅಧ್ಯಯನಗಳಿಗೆ ತಳಹದಿ ಆಗಬಹುದು. ಅಂಚೆ ಚೀಟಿ ಮತ್ತು ನಾಣ್ಯಗಳು ಯಂತ್ರದಿಂದ ತಯಾರಾಗುವುದರಿಂದ ಒಂದೇ ರೀತಿ ಇರುವುವು. ಆದರೆ ಯಾವ ಎರಡು ಚಿಪ್ಪುಗಳೂ ಒಂದೇ ತರಹ ಇರುವುದಿಲ್ಲ. ಒಂದು ಪ್ರಭೇದದ ಪ್ರಾಣಿಗಳಲ್ಲಿನ ವ್ಯತ್ಯಾಸಗಳಿಂದಾಗಿ ಅವು ಬೇರೆ ಬೇರೆ ಪ್ರಭೇದಗಳೆಂದು ಖಚಿತವಾಗಿ ಪರಿಗಣಿಸಿದ್ದ ಪ್ರಾಣಿಗಳು ನಿಜವಾಗಿಯೂ ವಿಪರೀತ ವ್ಯತ್ಯಾಸಗಳನ್ನು ತೋರಿಸುವ ಒಂದೇ ಪ್ರಾಣಿ ಪ್ರಬೇದದ ಬಹುರೂಪಗಳೆಂದು ಅವುಗಳ ವಿಚಾರವಾಗಿ ಹೆಚ್ಚು ಅಂಶಗಳನ್ನು ಸಂಗ್ರಹಿಸಿ ತೋರಿಸಬಹುದು. ಇಂಥ ಕಾರಣಗಳಿಂದಾಗಿ ಚಿಪ್ಪು ಸಂಗ್ರಹಣೆ ಹವ್ಯಾಸ ಮಿಕ್ಕ ಹವ್ಯಾಸಗಳಿಗಿಂತ ಹೆಚ್ಚು ಚೋದಕವೆನಿಸಿದೆ. ವಾಸ್ತವವಾಗಿ, ಮೊದಲು ಮೋಜಿಗಾಗಿ ಸಂಗ್ರಹವನ್ನು ಪ್ರಾರಂಭಿಸಿದ ಅನೇಕರು ಈಗ ಚಿಪ್ಪು ಅಧ್ಯಯನದ ಪ್ರಮುಖ ವಿಜ್ಞಾನಿಗಳಾಗಿದ್ದಾರೆ. ಚಿಪ್ಪು ಸಂಗ್ರಹಣೆಯಲ್ಲಿ ವಿಶೇಷ ವಿಷಯವೆಂದರೆ ಚಿಪ್ಪುಗಳನ್ನು ಶೇಖರಿಸಲು ಅಷ್ಟಾಗಿ ಮುನ್ನೆಚ್ಚರಿಕೆ ವಹಿಸಬೇಕಾಗಿಲ್ಲ. ಅಲ್ಲದೆ ತೊಂದರೆ ಕಡಿಮೆ. ಕೀಟಗಳಾದ ಚಿಟ್ಟೆ, ಜೀರುಂಡೆ ಅಥವಾ ಸಸ್ಯಭಾಗಗಳನ್ನು ಶೇಖರಿಸಲು ಬೇಕಾದ ಜಾಗರೂಕತೆ ಚಿಪ್ಪುಗಳ ಬಗ್ಗೆ ಬೇಕಾಗಿಲ್ಲ. ಚಿಪ್ಪುಗಳು ಖನಿಜಗಳಷ್ಟು ಭಾರವಿಲ್ಲ. ಇವಕ್ಕೆ ಕೀಟಗಳ ಅಥವಾ ಶಿಲೀಂಧ್ರಗಳ ಕಾಟವಿಲ್ಲ. ಚಿಪ್ಪುಗಳನ್ನು ಒಮ್ಮೆ ಚೆನ್ನಾಗಿ ಶುಚಿಮಾಡಿ ಅವುಗಳ ಗುರುತಿನ ಚೀಟಿಯನ್ನು ಲಗತ್ತಿಸಿ ಮೇಜಿನಲ್ಲಾಗಲಿ ಅಥವಾ ಬೀರುವಿನಲ್ಲಾಗಲಿ ಇಟ್ಟರೆ ವರ್ಷಾನುಕಾಲ ಯಾವ ಬದಲಾವಣೆಯೂ ಇಲ್ಲದೆ ಕೆಡದೆ ಇರುವುವು.
(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ